ನಾನು ಶಿಸ್ತಾಗಿ ಕೂತು ಏನನ್ನಾದರೂ ನಿಯಮಿತವಾಗಿ ಬರೆದದ್ದು ಅಪರೂಪ. ಮನಸ್ಸಿನಲ್ಲಿ ಕೆಲವು ನಂಬಿಕೆಗಳು ಇದಕ್ಕೆ ಸಹಾಯಕವಾಗಿ ವರ್ತಿಸುತ್ತಿದ್ದವು. ಮೊದಲನೆಯದ್ದು ಬರವಣಿಗೆಯಲ್ಲಿ ತೊಡಗಿರುವವರು ಚಿಂತಕರು. ಅವರಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ ಎಂಬುದಾದರೆ ಎರಡನೆಯದು ಅಕ್ಷರ ಹಾದರ (ಆತ್ಮ ಸಾಕ್ಷಿಗೆ ನಿಷ್ಟವಾಗದೆ ಬರೆಯುವುದು) ಮಾಡಬಾರದು ಎಂಬುದು. ಈ ಎರಡು ಕಾರಣಗಳ ಮಾದರಿಯಲ್ಲದ, ಆಲೋಚನೆಗಳು ಮೂಡುವ ವೇಗದಲ್ಲಿ ಪದಗಳನ್ನು ಇಳಿಸಲು ಸಾಧ್ಯವಾಗದಿರುವ ಕಾರಣವೂ ಇದೆ. ಆದರೆ ಕಳೆದೊಂದು ವಾರದಿಂದ ನಡೆಯುತ್ತಿರುವ ದೇಶದಲ್ಲಿನ ರಾಜಕೀಯ ವಿದ್ಯಮಾನಗಳು ಹಾಗೂ ನನ್ನ ವೈಯುಕ್ತಿಕ ಜೀವನದಲ್ಲೂ ಆದ ಬದಲಾವಣೆಗಳು, ನನ್ನನ್ನು ಬರೆಯಲು ಕೂರಿಸಿವೆ. ನಾನು ಮತದಾನ ಮಾಡಲು ಅರ್ಹತೆ ಪಡೆದು ೨೦ ವರ್ಷಗಳೇ ದಾಟಿವೆ. ಎಂದೂ ಮತದಾನವನ್ನು ತಪ್ಪಿಸಿಕೊಂಡಿಲ್ಲ. ಪ್ರತಿಬಾರಿಯೂ ನನಗೆ ಸರಿ ತೋಚಿದ ವ್ಯಕ್ತಿ - ಪಕ್ಷಕ್ಕೆ ಬಟನ್ ಒತ್ತಿ ಬಂದಿದ್ದೇನೆ. (ಒಂದೇ ಒಂದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಬ್ಯಾಲಟ್ ಪೇಪರ್ ಮೂಲಕ ಮತಾ ಚಲಾಯಿಸಿದ್ದೆ.) ಪ್ರತಿ ಬಾರಿಯೂ ನನಗೆ ಅತಿ ಆಪ್ತವಾಗಿರುವ ಕನ್ನಡ - ಕರ್ನಾಟಕ - ಕನ್ನಡಿಗ ಕುರಿತಾದ ನೆರೇಟೀವ್ ಗೆ ಸೂಕ್ತ ಹೊಂದುವವರನ್ನು ಬೆಂಬಲಿಸುತ್ತಿದ್ದೇನೆ. ಒಮ್ಮೆ ವಿಜಯ ಸಂಕೇಶ್ವರರ ಕನ್ನಡ ನಾಡು ಪಕ್ಷಕ್ಕೂ ಬಟನ್ ಗುದ್ದಿ ಬಂದದ್ದಿದೆ. ನನಗೆ ಈಗ ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು ಅನ್ನೋ ಮಾತು ಸವಕಲು ನಾಣ್ಯದಂತೆ...