ಮನೆಯಿಂದ ಹೊರಗೆ ಕಾಲಿಟ್ಟರೆ ಕಿವಿಗಡಚಿಕ್ಕುವ ಮೈಕಾಸುರನ ಹಾವಳಿ. ಇದು ಮೇ ೫ ರಂದು ಕರ್ನಾಟಕದ ವಿಧಾನಸಭೆಗಾಗಿ ನಡೆಯುವ ಚುನಾವಣೆಗಾಗಿ ನಡೆದಿರುವ ಪ್ರಚಾರದ ಒಂದು ಭಾಗವಷ್ಟೆ. ಐದು ವರ್ಷಗಳಿಂದ ರಾಜ್ಯದ ಜನರನ್ನು ಯಾಮಾರಿಸಿ, ಗುಡಿಸಿ ಗುಂಡಾಂತರ ಮಾಡಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗಮನವೆಲ್ಲ ಈಗ ಕನ್ನಡಿಗರ ಮತಗಳನ್ನು ಪಡೆಯುವುದರ ಮೇಲೆ. ಆದರೆ ಅವರ ಜೂರತ್ತು ಹೇಗಿದೆ ನೋಡಿ, ಕರ್ನಾಟಕದ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲಿಕ್ಕೆ, ಕನ್ನಡ ಬಾರದ ಕೇಂದ್ರ ನಾಯಕರುಗಳನ್ನು ಕರೆಸಿ, ಹಿಂದಿಯಲ್ಲೇ ಪ್ರಚಾರ ಭಾಷಣ ಮಾಡಿಸುತ್ತಿದ್ದಾರೆ. ಬಾರದ ನುಡಿಯ, ಇವರುಗಳ ಮಾತುಗಳನ್ನು ಕೇಳಿ ಕನ್ನಡಿಗರು ಇವರಿಗೆ ಮತಹಾಕಬೇಕಂತೆ. ಇನ್ನು ಚುನಾವಣೆಯಲ್ಲಿ ಚರ್ಚಿತವಾಗುತ್ತಿರುವ ವಿಷಯಗಳು ನಿಜವಾಗಿಯೂ ಕರ್ನಾಟಕದ ಜನರು ಕೇಳಬಯಸಿದಂತಹವುಗಳೇ. ಊಹ್ಞೂಂ. ಕೇಂದ್ರದಲ್ಲಿನ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ, ಕರ್ನಾಟಕವೇಕೆ ಕಣವಾಗಬೇಕು. ಕರ್ನಾಟಕದ್ದೇ ನೂರಾರು ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಮಾತನಾಡುವವರು ಯಾರು? ಆಡಿದರೂ ಕೆಲ ಜನಪ್ರಿಯ ವಿಚಾರಗಳನ್ನಷ್ಟೇ ನೆಪ ಮಾತ್ರಕ್ಕೆ ಎತ್ತಿಕೊಳ್ಳುತ್ತಾರೆ. ಉದಾಹರಣೆಗೆ, ಬೆಳಗಾವಿ ಗಡಿ ಸಮಸ್ಯೆ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ. ಇವು ಮಾತ್ರ ಕನ್ನಡಿಗರ ಸಮಸ್ಯೆಗಳೇ. ನಿಜವಾಗಿಯೂ ಕರ್ನಾಟಕದಲ್ಲಿ ಇದಕ್ಕಿಂತಲೂ ಆಳವಾದ ಅನೇಕ ಚಿಂತಾಜನಕ ಸಮಸ್ಯೆಗಳಿದ್ದಾವೆ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅವುಗಳ ಸುತ್ತ ಜನಾಭಿಪ್ರಾಯವೂ ಇನ್ನೂ ರೂಪುಗೊಂಡಿಲ್ಲ. ಅಂತಹ ಕೆಲವನ್ನಾದರೂ ಈ ಲೇಖನದ ಮೂಲಕ ಪ್ರಕಾಶಕ್ಕೆ ತರುವುದು ನನ್ನ ಉದ್ದೇಶ. ಒಂದೊಂದನ್ನೇ ನೋಡೋಣ. ಮೊದಲನೆಯದಾಗಿ ಕರ್ನಾಟಕವನ್ನು ತೀವ್ರವಾಗಿ ಕಾಡುತ್ತಿರುವುದು ಅನಿಯಂತ್ರಿತ ವಲಸೆಯ ಸಮಸ್ಯೆ. ರಾಜ್ಯದಲ್ಲಿನ ಕೈಗಾರಿಕೆಗಳ ಅಭಿವೃದ್ಧಿಯ ಫಲ ಇಲ್ಲಿನ ಮೂಲನಿವಾಸಿಗಳಾದ ಕನ್ನಡಿಗರಿಗಿಂತ, ಈ ಹೊರರಾಜ್ಯಗಳಿಂದ ಬರುತ್ತಿರುವ ವಲಸಿಗರಿಗೆ ದೊರೆಯುತ್ತಿರುವುದು, ಆತಂಕಕಾರಿಯಾದ ವಿಚಾರ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ಪ್ರಕ್ರಿಯೆಯಿಂದಾಗುತ್ತಿರುವ ಪರಿಣಾಮ ಹೆಚ್ಚು ಗೋಚರವಾಗುತ್ತದೆ. ಮಾಹಿತಿ ತಂತ್ರಜ್ಞಾನದ ಏಕಮೇವಾದ್ವಿತೀಯ ನಗರವಾಗಿ ಗುರುತಿಸಿಕೊಂಡ ಮೇಲಂತೂ ಬೆಂಗಳೂರಿಗೆ ವಲಸಿಗರ ದಂಡೇ ಹರಿದುಬಂದಿದೆ. ಇದರ ಫಲಶೃತಿಯಾಗಿ, ಬೆಂಗಳೂರಿನ ಅಭಿವೃದ್ಧಿಯ ಪ್ರತಿಫಲ ಹೆಚ್ಚಾಗಿ ದಕ್ಕಿರುವುದು ವಲಸಿಗರಿಗೆ. ಒಂದು ಅಂದಾಜಿನಂತೆ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿರುವವರಲ್ಲಿ ಕನ್ನಡಿಗರ ಪ್ರಮಾಣ ಕೇವಲ ಶೇ ೧೦ ರಷ್ಟು! ಎಲ್ಲೋ ಬೆಂಗಳೂರಿನ ಸುತ್ತಮುತ್ತಲಿನ ಕೆಲ ಭೂಮಾಲೀಕರು, ಲಕ್ಷ-ಕೋಟಿಗಳ ಮುಖ ನೋಡಿರಬಹುದಷ್ಟೇ. ಆದರೆ ಈ ಉದ್ಯಮದಿಂದ ಇತರ ಕನ್ನಡಿಗರಿಗಾದ ಲಾಭ ಅಷ್ಟಕ್ಕಷ್ಟೇ! ಈಗ ಬೆಂಗಳೂರಿನಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆಯೆಂದರೆ, ಕಛೇರಿಗಳ ಸುರಕ್ಷಾ ಸಿಬ್ಬಂದಿಗಳೂ ಸಹ ವಲಸಿಗರೇ ಆಗಿರುತ್ತಾರೆ. ಬೆಂಗಳೂರಿನ ಅಭಿವೃದ್ಧಿ ಇದೇ ಧಾಟಿಯಲ್ಲಿ ಸಾಗಿದರೆ, ಒಂದು ದಿನ ಕರ್ನಾಟಕಕ್ಕೂ, ಬೆಂಗಳೂರಿಗೂ ಯಾವುದೇ ಸಂಬಂಧ ಇಲ್ಲದಂತಾಗುವುದು ನಿಶ್ಚಿತ. ಈಗಾಗಲೇ ಬೆಂಗಳೂರಿನ ಚರ್ಯೆಯಲ್ಲಿ ಇದು ಎದ್ದು ಕಾಣುತ್ತಿದೆ. ವಲಸೆ ಕೇವಲ ಬೆಂಗಳೂರಿಗೇ ಸೀಮಿತವಾಗಿಲ್ಲ, ರಾಜ್ಯದ ಚಿಕ್ಕ ಚಿಕ್ಕ ನಗರಗಳಿಗೆ ವ್ಯಾಪಿಸಿದೆ. ಇಲ್ಲದೇ ಹೋದರೆ, ಕಾರವಾರಕ್ಕೆ, ಗೋವಾ ರಾಜ್ಯದ ಮುಖ್ಯಮಂತ್ರಿ ಬಂದು ಪ್ರಚಾರ ನಡೆಸುವುದು, ತೆಲುಗು ನಟ ಚಿರಂಜೀವಿ ಗೌರಿಬಿದನೂರಿನಲ್ಲಿ ತೆಲುಗಿನಲ್ಲಿ ಪ್ರಚಾರ ಭಾಷಣ ಮಾಡುವುದು, ರಾಹುಲ, ವರುಣ, ಸೋನಿಯಾ ಗಾಂಧಿಗಳು, ಮನಮೋಹನ ಸಿಂಗರು, ಮೋದಿಗಳು ಬಂದು, ಕರ್ನಾಟಕ ಒಂದು ಕಿರು ಭಾರತದಂತೆ, ಇಲ್ಲಿ ಎಲ್ಲ ತರಹ ಜನರಿದ್ದಾರೆ ಎಂದು ಹಿಂದಿಯಲ್ಲಿ ನಮಗೇ ತಿಳಿಸಿಕೊಡುವುದು ಹೇಗೆ ಸಾಧ್ಯವಾಗುತ್ತಿತ್ತು. ಈ ವಲಸೆಯ ವಿಕಾರ ನರ್ತನದಿಂದ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯದಂತಾಗಿ ಹೋಗಿದೆ. ನೋಡಿ, ದಾವಣಗೆರೆಯ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ, ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ, ದಾಂಡೇಲಿಯ ಕಾಗದ ಕಾರ್ಖಾನೆಯಲ್ಲಿ ದುಡಿಯಲಿಕ್ಕೆ ವಲಸಿಗರೇ ಆಗಬೇಕು. ಬರೀ ಕಾರ್ಖಾನೆಗಳಲ್ಲಿ ಅಲ್ಲ, ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕೂಲಿ ಮಾಡಲೂ ವಲಸಿಗರು ಬೇಕು. ಇನ್ನು ನಮ್ಮ ರಾಜ್ಯದ ನೀರಾವರಿ ಅಭಿವೃದ್ಧಿ ಯೋಜನೆಗಳ ಫಲವಾಗಿ ಬಂಗಾರದಂತಹ ಕೃಷಿ ಭೂಮಿ ಪರರಾಜ್ಯದ ವಲಸಿಗರ ಪಾಲಾಗಿವೆ. ನಾರಾಯಣಪುರ ಅಣೆಕಟ್ಟಿನ ಜಲಾನಯನ ಪ್ರದೇಶ, ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶ, ವಾಣಿವಿಲಾಸ ಸಾಗರ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಡೆಮಾಗ್ರಫಿಯೇ ಬದಲಾಗುವ ಮಟ್ಟಕ್ಕೆ ವಲಸಿಗರು ತುಂಬಿಹೋಗಿದ್ದಾರೆ. ಕರ್ನಾಟಕದ ಅಭಿವೃದ್ಧಿ ನಿಜವಾಗಿಯೂ ಕನ್ನಡಿಗ ಕೇಂದ್ರಿತವಾಗಿದೆಯೇ. ಪ್ರಶ್ನೆ ಎತ್ತಬೇಕಾದವರೂ ನಾವೇ. ಮುಂದುವರಿದು ನೋಡಿದಾಗ ದಿಗ್ಗೋಚರವಾಗಿ ಕಾಣುವುದು, ಕೇಂದ್ರ ಸರ್ಕಾದಿಂದ ರಾಜ್ಯದ ಅಭಿವೃದ್ಧಿಯ ನಿರಂತರ ನಿರ್ಲಕ್ಷ್ಯ. ಸಮಸ್ಯೆಗಳ ಪರಿಹಾರಕ್ಕೆ ಉದಾಸೀನತೆ. ರೈಲು ಅಭಿವೃದ್ಧಿಯನ್ನೇ ಗಮನಿಸಿ. ಇಡೀ ದೇಶದಲ್ಲೇ ಅತ್ಯಂತ ಕಡಿಮೆ ರೈಲು ಪಥವನ್ನು ಹೊಂದಿರುವ ರಾಜ್ಯ ಕರ್ನಾಟಕ. ಆದರೂ ಕರ್ನಾಟಕದ ಯೋಜನೆಗಳನ್ನು ಮಂಜೂರು ಮಾಡಿಸಿಕೊಳ್ಳಲು, ನಾವು ಪ್ರತಿಸಲವೂ ಕೇಂದ್ರದ ಮುಂದೆ ಮಂಡಿಯೂರಿ ಕೂರಬೇಕು. ಆದರೂ ನಮಗೆ ಸಿಗುವುದು, ಲೆಕ್ಕಕ್ಕೂ ಇಲ್ಲದ ಪುಡಿಗಾಸಿನ ಅನುದಾನ. ಕರ್ನಾಟಕವೆಂದರೆ ಕೇವಲ ಬೆಂಗಳೂರು ಮಾತ್ರವೇ? ಕರ್ನಾಟಕದ ಶೇ ೮೫ರಷ್ಟು ಜನ ಬೆಂಗಳೂರಿನ ಹೊರಗೆ ವಾಸಿಸುತ್ತಾರೆ. ಅವರ ಜೀವನಮಟ್ಟದ ಸುಧಾರಣೆಯೂ ಕರ್ನಾಟಕದ ಅಭಿವೃದ್ಧಿಯ ಭಾಗವಾಗವಲ್ಲವೇ. ಬರೀ ಬೆಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಾ ಹೋದರೆ, ರಾಜ್ಯದ ಇತರ ಭಾಗಗಳು ಅಭಿವೃದ್ಧಿ ಹೊಂದುವುದು ಹೇಗೆ. ಬೆಂಗಳೂರು ಕೇಂದ್ರಿತ ಅಭಿವೃದ್ಧಿಯಿಂದಾಗಿರುವ ನಷ್ಟವನ್ನೇ ನೋಡಿ. ಬೆಂಗಳೂರಿಗೆ ಸರಿಸಮವಲ್ಲದಿದ್ದರೂ ಸೌಲಭ್ಯಗಳನ್ನು ಹೊಂದಿದ ಮತ್ತೊಂದು ನಗರವೇ ಇಲ್ಲ. ತಮಿಳುನಾಡಿನಲ್ಲಿ, ಕೊಯಮತ್ತೂರು, ಮಧುರೈಗಳಿವೆ, ಆಂಧ್ರಪ್ರದೇಶದಲ್ಲಿ ವಿಜಯವಾಡ ವಿಶಾಖಪಟ್ಟಣಗಳಿದ್ದಾವೆ, ಮಹಾರಾಷ್ಟ್ರದಲ್ಲಿ ಪುಣೆ, ನಾಗಪುರಗಳಿವೆ. ಆದರೆ ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೊಂದು ನಗರವಿಲ್ಲ. ಮೈಸೂರು, ಹುಬ್ಬಳ್ಳಿ-ಧಾರವಾಡಗಳಿಗೆ ಈ ಸ್ಥಾನವನ್ನು ತುಂಬುವ ಅವಕಾಶವಿದ್ದರೂ ಸಹ, ಅಲ್ಲಿ ಕೈಗಾರಿಕೆಗಳ ಕೊರತೆಯಿದೆ. ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಅವು ನರಳುತ್ತಿವೆ. ಬೆಳಗಾವಿ, ಮಂಗಳೂರು, ಕಲ್ಬುರ್ಗಿ, ದಾವಣಗೆರೆಯಂತಹ ಎರಡನೆಯ ದರ್ಜೆಯ ನಗರಗಳು ಅಭಿವೃದ್ಧಿಯಾಗಬೇಕು. ಇದೂ ಪ್ರಚಲಿತ ವಿಚಾರವಾಗಬೇಕಲ್ಲವೇ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ, ಕನ್ನಡಿಗರ ಪ್ರಮಾಣ ಅತ್ಯಂತ ಕಡಿಮೆಯಿದೆ. ಕರ್ನಾಟಕದ ಹೊರಗೆ ಹೋದರೆ, ತಮಿಳರು, ತೆಲುಗರು, ಮಲೆಯಾಳಿಗರನ್ನು ಕಂಡಷ್ಟು ಸುಲಭವಾಗಿ ಕನ್ನಡಿಗರನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಉದ್ಯೋಗಗಳು ಸರಿಯಾದ ಅನುಪಾತದಲ್ಲಿ ಕನ್ನಡಿಗರಿಗೆ ದೊರೆಯುವಂತಾಗಬೇಕು. ಇದನ್ನೂ ನಮ್ಮ ಪ್ರತಿನಿಧಿಯಾದ ರಾಜ್ಯಸರ್ಕಾರವೇ ಮಾಡಬೇಕು. ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ವಿಷಯವನ್ನಾಗಿ ಕಲಿಸಬೇಕು. ಅದು ಕೇಂದ್ರದ ಪಠ್ಯಕ್ರಮವಿರಲಿ, ರಾಜ್ಯ ಪಠ್ಯಕ್ರಮವಿರಲಿ. ಐತಿಹಾಸಿಕ ಕಾರಣಗಳಿಂದಾಗಿ, ಕರ್ನಾಟಕ ಎಂದರೆ ಹಳೆ ಮೈಸೂರು ಪ್ರಾಂತ್ಯ ಎನ್ನುವಂತಾಗಿರುವುದಕ್ಕೆ, ಆ ಭಾಗಕ್ಕೆ ನಾವು ನೀಡಿರುವ ಅತಿಯಾದ ಮಹತ್ವವೇ ಕಾರಣ. ತಪ್ಪಿಲ್ಲ. ಆದರೆ ರಾಜ್ಯದ ಇತರ ಭಾಗಗಳಿಗೂ ಸಮಾನವಾದ ಮಹತ್ವ ನೀಡಬೇಕು. ಎಲ್ಲ ಭಾಗಗಳನ್ನೂ ಒಂದೇ ಸಮನಾಗಿ ಅಭಿವೃದ್ಧಿಪಡಿಸಬೇಕು. ಕಾವೇರಿಯಂತೆ, ಕೃಷ್ಣೆ, ಭೀಮೆ, ತುಂಗಭದ್ರೆಗಳೂ ಕರ್ನಾಟಕದ ಜೀವನದಿಗಳು ಎಂಬ ಅರಿವು ಮೂಡಬೇಕು. ಅವುಗಳ ವಿಚಾರದಲ್ಲಿ ಸಮಸ್ಯೆಗಳೆದುರಾದಾಗ, ಅಷ್ಟೇ ಕಾಳಜಿಯಿಂದ ಅವುಗಳ ಪರಿಹಾರಕ್ಕೆ ಮುಂದಾಗಬೇಕು. ಇಷ್ಟು ಆದರೆ ಕರ್ನಾಟಕ ಸುಸಂಪನ್ನವಾಗಿರಲು ಒಂದು ಹೆಜ್ಜೆ ಮುಂದಿಟ್ಟಂತಾಗುತ್ತದೆ. ಇದನ್ನು, ನಮ್ಮನ್ನು ಪ್ರತಿನಿಧಿಸಹೊರಟಿರುವ ಆಳುವ ವರ್ಗಕ್ಕೆ ಮನದಟ್ಟಾಗಿಸುವುದೂ ನಮ್ಮದೇ ಕರ್ತವ್ಯ. ನಮ್ಮ ಮತ ಇದನ್ನು ಮಾಡಬಲ್ಲದು. ಈ ವಿಚಾರಗಳನ್ನು ನಿಮ್ಮ ಸಂಗಡಿಗರೊಂದಿಗೂ ಹಂಚಿಕೊಂಡರೆ, ಕರ್ನಾಟಕ ಕೇಂದ್ರಿತ ಅಜೆಂಡಾವೊಂದನ್ನು ರೂಪಿಸಲು ಸಾಧ್ಯವಾಗುತ್ತದೆ.

0 Comments